ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ- ಸಿಕ್ಕಾಪಟ್ಟೆ ಎಮೋಷನ್ಸ್ ಪ್ರೇಮಕಥೆಗೆ ತ್ಯಾಗದ ಲೇಪನ.. ರೇಟಿಂಗ್ : 4/5 ****
Posted date: 18 Sat, Nov 2023 10:04:41 AM
ಪ್ರಿಯಾ ಮತ್ತು ಮನು  ಪ್ರೇಮಕಥೆಯ ಮುಂದುವರಿದ ಭಾಗವೇ  ಸೈಡ್ ಬಿ. ಮಾಡದ ತಪ್ಪಿಗೆ ಹತ್ತು ವರ್ಷ ಜೈಲುಶಿಕ್ಷೆ ಅನುಭವಿಸಿ  ಹೊರ ಬಂದ  ಮನು ಮುಂದೇನು ಮಾಡುತ್ತಾನೆ ಅನ್ನೋದೇ  ಈ ಭಾಗದ ಹೈಲೈಟ್. ಪ್ರೇಕ್ಷಕರಿಗಿದ್ದ ಕುತೂಹಲವೂ ಅದೇ. ಇಲ್ಲಿ ರಕ್ಷಿತ್‌ಶೆಟ್ಟಿ, ರುಕ್ಮಿಣಿ ವಸಂತ್ ಪಾತ್ರಗಳ ಜೊತೆ ಚೈತ್ರಾ ಬಿ.ಆಚಾರ್ ಅಭಿನಯಿಸಿದ ಸುರಭಿ ಎಂಬ ಪಾತ್ರವೂ ಸೇರ್ಪಡೆಯಾಗಿದೆ,  ಸಾಕಷ್ಟು  ನಿರೀಕ್ಷೆಗಳನ್ನು ಹೊತ್ತು  ಥೇಟರಿಗೆ ಬರುವ  ಪ್ರೇಕ್ಷನಿಗೆ  ಸಾಗರದಾಚೆ, ಇನ್ನೂ ಏನೇನಿದೆ ಎಂದು ನಿರ್ದೇಶಕ ಹೇಮಂತ್ ಇಲ್ಲಿ ಹೇಳಿದ್ದಾರೆ.  ಮೊದಲ ಭಾಗದಲ್ಲಿ  ನವಿರಾದ ಪ್ರೀತಿ ಪ್ರೇಮದ ತಂಗಾಳಿಯನ್ನು ಅನುಭವಿಸಿದ ಪ್ರೇಕ್ಷಕನಿಗೆ  ಇಲ್ಲಿ ಉತ್ಕಟ ಪ್ರೇಮಕಥೆಯನ್ನು ತೆರೆದಿಟ್ಟಿದ್ದಾರೆ, ಮನು ಪಾತ್ರದ ಮತ್ತೊಂದು ಶೇಡ್ ಈ ಚಿತ್ರದಲ್ಲಿದೆ,  

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಕೋವಿಡ್ ಹರಡಿದ್ದ ಸಮಯದಲ್ಲಿ ನಡೆಯುವ ಕಥೆ, ಮೊದಲ ಭಾಗ ಎಲ್ಲಿ ಎಂಡ್ ಆಗಿತ್ತೋ ಅಲ್ಲಿಂದಲೇ ಈ ಚಿತ್ರ ಪ್ರಾರಂಭವಾಗುತ್ತದೆ. ಜೈಲಿಂದ ಹೊರಬಂದ  ಮನು  ಮಾಡುವ ಮೊದಲ ಕೆಲಸ ಪ್ರಿಯಾ ಎಲ್ಲಿದ್ದಾಳೆಂದು ಹುಡುಕುವುದು. ಜೈಲಲ್ಲಿ ಸೇಹಿತನಾಗಿದ್ದ ಪ್ರಕಾಶ(ಗೋಪಾಲಕೃಷ್ಣ ದೇಶಪಾಂಡೆ)ಮನುಗೆ ಉಳಿದುಕೊಳ್ಳಲು ಜಾಗ ನೀಡುತ್ತಾನೆ. ಜೊತೆಗೊಂದು ಕೆಲಸವನ್ನೂ ಕೊಡುತ್ತಾನೆ. ಪ್ರಿಯಾಳನ್ನು ನೋಡಬೇಕು, ಆಕೆಯನ್ನು  ಮಾತಾಡಿಸಬೇಕೆಂಬ ಆಸೆಯಿಂದ, ಆಕೆಗಾಗಿ ಹುಡುಕಾಟ ನಡೆಸುತ್ತಾನೆ. ಈ ಮಧ್ಯೆ ಜೀವನಕ್ಕಾಗಿ ವೇಶ್ಯಾವೃತ್ತಿ ಮಾಡಿಕೊಂಡಿದ್ದ ಸುರಭಿಯ ಪರಿಚಯವಾಗಿ ಆಕೆಯ ಜೊತೆ ಆತ್ಮೀಯತೆಯೂ ಬೆಳೆಯುತ್ತದೆ. 

ಮನು ಜೈಲಲ್ಲಿದ್ದಾಗಲೇ ಮದುವೆಯಾಗಿದ್ದ ಪ್ರಿಯಾಗೆ ಒಂದು ಮಗು ಕೂಡ ಇರುತ್ತದೆ.  ಈಗವಳು ಹಾಡುವುದನ್ನೂ ನಿಲ್ಲಿಸಿರುತ್ತಾಳೆ, ಪುಟ್ಟ ಹೋಟೆಲ್ ಇಟ್ಟುಕೊಂಡು ಚೆನ್ನಾಗಿಯೇ ಜೀವನ ನಡೆಸುತ್ತಿದ್ದ ಆಕೆಯ ಗಂಡ ದೀಪಕ್, ಕೋವಿಡ್‌ ಬಂದ್ ನಿಂದ ನಷ್ಟ ಅನುಭವಿಸುತ್ತಾನೆ. ಹೋಟೆಲ್‌ ಆರಂಭಿಸಲು ಮಾಡಿಕೊಂಡಿದ್ದ ಸಾಲ ತೀರಿಸಲಾಗದೆ, ಕುಡಿತದ ದಾಸನಾಗಿ ಅದನ್ನೇ ಹವ್ಯಾಸ ಮಾಡಿಕೊಂಡಿರುತ್ತಾನೆ. ಪ್ರಿಯಾಳ ಜೀವನ ಸರಿಪಡಿಸಬೇಕು, ಆಕೆ ಮತ್ತೆ ಮೊದಲಿನ ಹಾಗೆ ಹಾಡುವಂತಾಗಬೇಕು ಎಂಬ ಪ್ರಯತ್ನದಲ್ಲಿ ಮೇಲಿಂದಮೇಲೆ ತಪ್ಪುಗಳನ್ನು ಮಾಡುತ್ತಲೇ ಹೋಗುತ್ತಾನೆ. ಆ ಕುಟುಂಬಕ್ಕೆ  ಗೊತ್ತಾಗದ ಹಾಗೆ ಹೋಟೆಲ್ ಪುನಾರಂಭಿಸಲು ಸಹಾಯ ಮಾಡುತ್ತಾನೆ. ಒಮ್ಮೆ ದೀಪಕ್ ಗೂ ಈ ವಿಷಯ ಗೊತ್ತಾಗುತ್ತದೆ. ಆತನ ಉದ್ದೇಶ ಅರಿತು‌ ವಿರೋಧ ವ್ಯಕ್ತಪಡಿಸದೆ ಬೆಂಬಲಿಸುತ್ತಾನೆ. ಮುಂದೆ ಪ್ರಿಯಾಳ ಬದುಕು ಸರಿಯಾಯ್ತೇ, ಮತ್ತೆ ಹಾಡಲು ಶುರು ಮಾಡಿದಳೇ, ಇಬ್ಬರೂ  ಮತ್ತೆ ಭೇಟಿಯಾದರೇ, ಇದನ್ನೆಲ್ಲ ಚಿತ್ರದ ಕೊನೆಯಲ್ಲಿ  ನಿರ್ದೇಶಕ ಹೇಮಂತ್ ತೆರೆದಿಟ್ಟಿದ್ದಾರೆ,  

ಪ್ರೀತಿ ಕಳೆದುಕೊಂಡು ಹುಚ್ಚನಂತಾಗಿದ್ದ ಮನು, ಸುರಭಿಯ ಸಂಗದಲ್ಲೇ  ಪ್ರಿಯಾಳನ್ನು ಕಾಣುತ್ತಾನೆ, ಇವರಿಬ್ಬರ ಪಾತ್ರವನ್ನು ನಿರ್ದೇಶಕರು ತುಂಬಾ ಆಳವಾಗಿ ತೆಗೆದುಕೊಂಡು ಹೋಗಿದ್ದಾರೆ. ಸೈಡ್ ಬಿ ಒಂದು ರಿವೇಂಜ್ ಸ್ಟೋರಿ ಇರಬಹುದು ಅನ್ನೋ ನಿರೀಕ್ಷೆಯಿತ್ತು. ಆದರೆ, ಇದರಲ್ಲಿ ರಿವೇಂಜ್ ಎಪಿಸೋಡ್ ಇದ್ದರೂ, ಹೀಗೆ ಬಂದು ಹಾಗೇ ಹೋಗುತ್ತೆ.  ಸಿಕ್ಕಾಪಟ್ಟೆ ಎಮೋಷನ್ಸ್ ಹಾಗೂ ಹುಚ್ಚು ಪ್ರೀತಿಯೂ ಇದೆ. ನಿಜವಾದ ಪ್ರೇಮಿ, ತನ್ನ ಪ್ರೇಯಸಿಗಾಗಿ ಏನೇನೆಲ್ಲ ಮಾಡುತ್ತ ಹೋಗುತ್ತಾನೆ ಅನ್ನೋದನ್ನು ಹೇಳಿದ್ದಾರೆ. ಆಗ ಪ್ರಿಯಾ ಹೇಗೆ ತನ್ನ ಪ್ರಿಯಕರನನ್ನು ಬಿಡಿಸಿಕೊಳ್ಳಲು ಹುಚ್ಚಿಯಂತೆ ಒಂಟಿಹೋರಾಟ  ನಡೆಸಿದ್ದಳೋ ಆ ಋಣವನ್ನಿಲ್ಲಿ  ಮನು ತೀರಿಸಿದ್ದಾನೆ.  

ರಕ್ಷಿತ್ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಬಿ.ಆಚಾರ್ ಸೇರಿದಂತೆ ಸಿನಿಮಾದಲ್ಲಿ ಬರುವ ಎಲ್ಲಾ  ಪಾತ್ರಗಳೂ ನೈಜವಾಗಿ ಮೂಡಿಬಂದಿವೆ. ರೌಡಿ ಸೋಮನಾಗಿ  ರಮೇಶ್ ಇಂದಿರಾ ರಗಡ್ ಆಗಿ  ಕಾಣಿಸಿಕೊಂಡಿದ್ದಾರೆ. ಚರಣ್‌ರಾಜ್ ಹಿನ್ನೆಲೆ ಸಂಗೀತ ಈ ಚಿತ್ರದ ಪ್ಲಸ್ ಪಾಯಿಂಟ್. ಲವ್ ಕಮ್ ಎಮೋಷನಲ್ ಡ್ರಾಮಾ  ಇದಾಗಿದ್ದರೂ, ತಾಂತ್ರಿಕತೆಯಿಂದ ಗಮನ ಸೆಳೆಯುತ್ತದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed